ಮುಚ್ಚಿ

ಆಸಕ್ತಿಯ ಸ್ಥಳಗಳು

ಗೋಳಗುಮ್ಮಟ

ವಿಜಯಪುರದ ನಭೋ ಭಿತ್ತಿಯಲ್ಲಿ ಹೊಳೆವ ಹೊನ್ನ ಮುಕುಟ ಗೋಳಗುಮ್ಮಟ. ಭಾರತೀಯ ಕಟ್ಟಡದ ನಿರ್ಮಾಣ ಶೈಲಿಯ ಅತ್ಯುತ್ತಮ ಉದಾಹರಣೆ ಎಂದೇ ಖ್ಯಾತಿ ಪಡೆದ ಈ ಸ್ಮಾರಕದ ನಿರ್ಮಾಣ ಆಗಿದ್ದು 1626-1656ರ ನಡುವೆ. ವಿಜಯಪುರದಲ್ಲಿ ಆಳ್ವಿಕೆ ನಡೆಸಿದ ಮೊಹಮದ್ ಆದಿಲ್ ಶಾ, ಆದಿಲ್ ಶಾ ಸಂತತಿಯ 7ನೇ ದೊರೆಯಾದ ಈತ ತನಗೆಂದೇ ಈ ಅಪರುಪ ಸಮಾಧಿಯನ್ನು ಕಟ್ಟಿಸಿದ. ಗೋಳಗುಮ್ಮಟದ ಗುಮ್ಮಟ, ರೋಮನಲ್ಲಿರುವ ಸೇಂಟ್ ಪೀಟರ್ಸ ಚರ್ಚ ಗುಮ್ಮಟವನ್ನು ಬಿಟ್ಟರೆ ಜಗತ್ತಿನಲ್ಲಿಯೊ ಅತಿದೊಡ್ಡ ಗುಮ್ಮಟ ಎಂದೇ ಖ್ಯಾತವಾದುದ್ದು. ಸುತ್ತ ಸುಂದರ ಉದ್ಯಾನದಿಂದ ಆವೈತವಾದ ಈ ಕಟ್ಟಡ ನೋಡಿದಾಕ್ಷಣ ತನ್ನ ಅಗಾಧತೆಯಿಂದ ದಿಗ್ಮೂಡವಾಗಿಸುತ್ತದೆ. ಮಧ್ಯದ 205 ಅಡಿಗಳ ಚಚ್ಚೌಕದಾಕಾರದ ಪ್ರಾಂಗಣವನ್ನು ಆವರಿಸಿ, 100 ಅಡಿಗೂ ಎತ್ತರದ 4 ಗೋಡೆಗಳ ಮೇಲೆ ಕಮಲದಳದ ತಳವನ್ನು ಕವುಜಿ ಹಾಕಿರುವಂತೆ ಕಟ್ಟಿರುವ ಅದ್ಭುತ ಗುಮ್ಮಟ ಅಷ್ಟದಳ ಗೋಪುರಗಳ ಮಧೈ ವಿರಾಜಮಾನವಾಗಿದೆ.
38 ಮೀಟರುಗಳ ವ್ಯಾಸವಿರುವ ಈ ಗುಮ್ಮಟದ ಸುತ್ತ ಕಿರು ಆವರಣವೊಂದಿದೆ. ಈ ಪ್ರೇಕ್ಷಕಾವರಣದ ವೈಶಿಷ್ಟೈ ಅದು ಅಡಗಿಸಿಕೊಂಡಿರುವ ಅದ್ಭುತ ಶಬ್ದ ತಂತ್ರದಲ್ಲಿದೆ. ಒಂದೇ ಒಂದು ಪಿಸುಮಾತು 10 ಬಾರಿ ಅನುರಣಿಸುವ ವಿಸ್ಫರಿಂಗ ಗ್ಯಾಲರಿ ನಿಜಕ್ಕೂ ರೋಮಾಂಚಕಾರಿ ಅನುಭವ. ಗೋಡೆಗಳಿಂದ ಹೊರಹೊಮ್ಮಿದಂತಿರುವ 11 ಅಡಿ 6 ಇಂಚುಗಳ ಕಾರ್ನೀಸು ಇಡೀ ದೇಶದಲ್ಲಿಯೇ ಇಂಜಿನೀಯರಿಂಗ್ ಕೌಶಲ್ಯದ ಅತ್ಯುತ್ತಮ ಉದಾಹರಣೆ ಎಂದು ಪ್ರಸಿದ್ಧಿ.

ಈ ಹಾಲ್ನ ಮಧ್ಯಭಾಗದಲ್ಲಿ ಎತ್ತರಿಸಿದ ವೇದಿಕೆಯಲ್ಲಿ ಮೊಹ್ಮದ್ ಆದಿಲ್ ಶಾ ಮತ್ತು ಅವನ ಪತ್ನಿಯ ಗೋರಿಯ ನಕಲು ಮಾದರಿಗಳಿವೆ. ವಾಸ್ತವ ಗೋರಿಗಳು ನೆಲಮಾಳಿಗೆಯಲ್ಲಿವೆ.

ವೀಕ್ಷಣೆ ಸಮಯ: ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ.

ಇಬ್ರಾಹಿಂ ರೋಜಾ

ಎರಡನೇ ಇಬ್ರಾಹಿಂ ಆದಿಲ್ ಶಹಾನ ಸಮಾಧಿ ಮತ್ತು ಮಸೀದಿಗಳಿರುವ ಈ ಅದ್ಭುತ ಅವಳಿ ಕಟ್ಟಡಗಳು, ವಿಜಯಪುರ ನಗರದ ಪಶ್ಚಿಮ ಭಾಗದ ಹೊರವಲಯದಲ್ಲಿದೆ. ಕುಶಲ ಶಿಲ್ಪದ ಮಿನಾರುಗಳಿಂದ ಆವೃತವಾದ ಈ ಕಟ್ಟಡಗಳ ಶಿಲ್ಪ ಸೌಂದರ್ಯ ವರ್ಣನಾತೀತ. ಅತ್ಯುಚ್ಚಮಟ್ಟದ ಶಿಲಾ ಕುಸುರಿ ಕೆಲಸವನ್ನು ದಾಖಲಿಸಿರುವ ಇಬ್ರಾಹಿಂ ರೋಜಾ ಇಡೀ ಭಾರತದಲ್ಲಿಯೊ ಅತ್ಯಂತ ಪ್ರಮಾಣಬದ್ಧವಾಗಿ ನಿರ್ಮಿಸಲಾದ ಇಸ್ಲಾಂ ಸ್ಮಾರಕಗಲಲ್ಲೊಂದು ಎಂಬ ಹೆಗ್ಗಳಿಕೆ ಪಡೆದ ಕಟ್ಟಡ. ವಿಶ್ವವಿಖ್ಯಾತ ತಾಜ್ ಮಹಲ್ನ ನಿರ್ಮಾಣಕ್ಕೆ ಸ್ಫೂತಿ ನೀಡಿದ ಕಟ್ಟಡ ಎಂದೂ ಇದಕ್ಕೆ ಖ್ಯಾತಿ. ಇದರ ಮುಂದಿರುವ ಮಸೀದಿ ಕೂಡ ಅಪಾರ ಸೌಂದರ್ಯದ ಖನಿ. ಐದು ಘನವಾದ ಪ್ರಬಾವಗಳಿಂದ ಕೂಡಿದ, ಶಿಲ್ಪಕಲೆಯ ಸಾರ ಸರ್ವಸ್ವವನ್ನು ಹೇರಿಕೊಂಡ ಶಿಲಾಘಲಕಗಳನ್ನು ಹೊಂದಿದ ಈ ಕಟ್ಟಡ ತನ್ನ ಅನುಪಮ ವಿನ್ಯಾಸ ಮತ್ತು ಸೌಂದರ್ಯದಿಂದ ನೋಡುಗರ ಮನ ಸೆಳೆಯುತ್ತಿದೆ. ಎತ್ತರವಾದ ಕಲ್ಲಿನ ವೇದಿಕೆಯ ಮೇಲೆ ಕಟ್ಟಲಾಗಿರುವ ಈ ನಿರ್ಮಾಣಗಳು ನಾಲ್ಕು ಮಿನಾರುಗಳನ್ನೊಳಗೊಂಡ ಸುಂದರವಾದೊಂದು ಗೋಪುರದಿಂದಾವೃತವಾಗಿದ್ದು ಸುತ್ತ ಸುಂದರವಾದ ಉದ್ಯಾನವನ್ನು ಹೊಂದಿದೆ.

ವೀಕ್ಷಣೆ ಸಮಯ: ಬೆಳಿಗೆ 6 ರಿಂದ ಸಂಜೆ 6 ಗಂಟೆವರೆಗೆ.

ಗಗನ್ ಮಹಲ್

ಅರಕಿಲ್ಲೆ ವ್ಯಾಪ್ತಿಯಲ್ಲಿ ಅತ್ಯುತ್ತಮ ಕಟ್ಟಡವೆಂದರೆ ಗಗನ ಮಹಲ್, 1561ರ ಆಸುಪಾಸಿನಲ್ಲಿ ಸುಲ್ತಾನರ ಅರಮನೆ ಮತ್ತು ದರ್ಬಾರ್ ಹಾಲ್ ಎಂದು ಕಟ್ಟಲ್ವಟ್ಟ ಈ ಕಟ್ಟಡದ ಪ್ರಮುಖ ಆಕರ್ಷಣೆಯೆಂದರೆ, 60 ಅಡಿ 90 ಇಂಚುಗಳಷ್ಟು ಅಗಲವಿರುವ ಅದ್ಭುತವಾದ ಕಮಾನು. ಈ ಸುಂದರ ಕಟ್ಟಡ ಇತಿಹಾಸದ ಅನೇಕ ಸ್ಮರಣೀಯ ಘಟನೆಗಳಿಗೆ ಮೂಕ ಸಾಕ್ಷಿ.
ವಿಜಯಪುರವನ್ನು ಆಕ್ರಮಿಸಿಕೊಂಡು ಅದನ್ನು ಗೆದ್ದ ಔರಂಗಜೇಬ, ಸಿಕಂದರ್ ಅಲಿ ಶಾ ನನ್ನು ಬೆಳ್ಳಿ ಸರಪಳಿಯಲ್ಲಿ ಬಂಧಿಸಿಟ್ಟದ್ದು ಇಲ್ಲಿಯೇ ಈ ಸುಂದರ ಕಟ್ಟಡದ ಛಾವಣೆಯೇ ಇಲ್ಲವಾದರು ಇದರ ನಿಗೂಢ ಸೌಂದರ್ಯಕ್ಕೆ ಮತ್ತು ಸುತ್ತಲಿನ ಮನಮೋಹಕ ಉದ್ಯಾನದ ಚೆಲುವಿಗೆ ಮಾರುಹೋಗಿ ಇದನ್ನು ಸಂದರ್ಶಿಸುವ ಯಾತ್ರಿಕರು ಗಗನಮಹಲ್ನ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತಾರೆ.

ಜಾಮೀಯಾ ಮಸೀದಿ

1557 ರಿಂದ 1580 ರವರೆಗೆ ರಾಜ್ಯಭಾರ ನಡೆಸಿದ ಒಂದನೇ ಅಲಿ ಆದಿಲ್ ಶಾ ವಿಜಯಪುರದ ಬೆಳೆಯತ್ತಿರುವ ಜನಸಂಖ್ಯೆಗೆ ಉಪಯೋಗವಾಗಲಿ ಎಂದು ಕಟ್ಟಿಸಿದ ಈ ಮಸೀದಿ, ತನ್ನ ಅದ್ಭುತ ಪರಿಣಾಮದಿಂದ ಗಮನ ಸೆಳೆವ ಚೌಕಾಖಾರದ ಕಟ್ಟಡ. 1,60,000 ಚ. ಅಡಿ. ವಿಸ್ತೀರ್ಣದ ಒಂದು ಪರಿಪೂರ್ಣ ಚೌಕದ ಒಳಗೆ ನಿರ್ಮಿತವಾಗಿರುವ ಈ ಮಸೀದಿಯ ಸುಂದರ ಕಮಾನುಗಳು, ಮತ್ತು ಗೋಪುರ ಮನಸೆಳೆಯತ್ತಿವೆ. ಪ್ರಾರ್ಥನಾ ಮಂದಿರದ ನೆಲಹಾಸಿನ ಸೊಗಸೇ ಸೊಗಸು. ಇಲ್ಲಿನ ಪರಿಪೂರ್ಣ 2250 ಮುಸುಲ್ಲಾಗಳು, ಕಪ್ಪು ಅಂಜಿನಿಂದ ಕೂಡಿದ್ದು ಇಷ್ಟೇ ಸಂಖ್ಯೆಯ ಭಕ್ತರಿಗೆ ಪ್ರಾರ್ಥನಾವಕಾಶ ಒದಗಿಸುತ್ತಿವೆ. ಮಸೀದಿಯ ಒಳಾಂಗಣದ ಗೋಡೆಯಲ್ಲಿರುವ ಕಮಾನು ಮೆಹ್ರಾಬ್ ಅದ್ಭುತವಾದ ಕ್ಯೆಬರವಣೆಗೆಯಲ್ಲಿ ಕೆತ್ತಿದ ಪವಿತ್ರ ಕುರಾನ್ನ ಸಾಲುಗಳನ್ನು ಬಂಗಾರ ನೀರಿನಿಂದ ಅಲಂಕಾರಗೊಳಿಸಲಾಗಿದೆ.

ಮಲಿಕ್-ಎ-ಮೈದಾನ್

ಶೇರ್-ಏ-ಬುರ್ಜ್ ಅಥವಾ ಸಿಂಹಗೋಪುರ ವಿಜಯಪುರ ಕೋಟೆಯ ಬುರುಜಗಳಲ್ಲೊಂದು ಇಲ್ಲಿ ಫಿರಂಗಿಗಳಿಡಲು ಕಟ್ಟಲಾದ 2 ವೇದಿಕೆಗಳಿವೆ. ಕೆಳಗಿನ ಕಟ್ಟೋಣದಲ್ಲಿರುವುದೇ ದೊಡ್ಡದೆನ್ನಲಾಗುವ ಮಲಿಕ್-ಎ-ಮೈದಾನ್ ಫಿರಂಗಿ. 1549ರಲ್ಲಿ ಅಹ್ಮದ ನಗರದಲ್ಲಿ ಎರಕ ಹೊಯ್ದು ತಯಾರಿಸಲಾದ ಈ ಪೀರಂಗಿಯನ್ನು ತನ್ನ ಅಳಿಯ ಆದಿಲ್ ಶಾ ಗೆಂದು ಹೇಳಿ ಮಾಡಿಸಿದವನು ಮೊದಲನೇ ಬುರ್ ಹನ್ ನಿಜಾಂ ಶಾ. ಲೋಹ ನಿರ್ಮಿತ ಈ ಫಿರಂಗಿಯನ್ನು ಆನೆಯನ್ನು ಬೇಟೆಯಾಡುತ್ತಿರುವ ಸಿಂಹದಂತೆ ವಿನ್ಯಾಸಗೊಳಿಸಲ್ವಟ್ಟಿದೆ. ಫಿರಂಗಿಯ ಹೊರಮೈ ಮೇಲೆ ಅರೇಬಿಯನ್ ಮತ್ತು ಪರ್ಷಿಯಾ ಭಾಷೆಗಳ ಕೆತ್ತನೆಗಳಿವೆ. 1565ರ ರಕ್ಕಸ-ತಂಗಡಗಿ ಯುದ್ಧದಲ್ಲಿ ಅಸಾಮಾನ್ಯವಾಗಿ ಬೆಂಕಿಯುಗುಳಿದ ಈ ಫಿರಂಗಿ ಆ ಯುದ್ಧವನ್ನು ಗೆದ್ದಕೊಟ್ಟಿದ್ದು ಈಗ ಇತಿಹಾಸ.

ಸಿದ್ದೇಶ್ವರ ದೇವಾಲಯ

ವಿಜಯಪುರ ವಿಶಿಷ್ಟ ವಾಸ್ತು ಶೈಲಿಯಿಂದ ಸ್ವೂರ್ತಿಗೊಂಡ ಈ ಸುಂದರ ಶಿವ ದೇವಾಲಯ ಸಾವಿರಾರು ಭಕ್ತಾದಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಒಂದು ಮಹತ್ವಪೂರ್ಣ ಕಟ್ಟಡ.

ಮೆಹ್ತರ್ ಮಹಲ್

ಮಸೀದಿ ಮತ್ತು ಉದ್ಯಾನವನೊಂದರ ಹೆಬ್ಬಾಗಿಲಾದ ಮೆಹ್ತರ್ ಮಹಲ್ನ ಕಮಾನಗಳು ತುಂಬ ಸುಂದರ. ಇಬ್ರಾಹಿಂ ಆದಿಲ ಶಾ ಕಟ್ಟಿಸಿರುವ ಈ ಕಟ್ಟಡ ಚೆಂದದೊಂದು ಸ್ಮಾರಕ.

ಆನಂದ ಮಹಲ್

ಇಬ್ರಾಹಿಂ ಆದಿಲ ಶಾ ನ ಸೌಂದರ್ಯಪ್ರಿಯತೆಗೆ ಮತ್ತೊಂದು ಸಾಕ್ಷಿ ಆನಂದ ಮಹಲ್. ಎರಡು ಮಹಡಿಗಳ ಈ ಅರಮನೆಯ ಮುಂದಿರುವ ಪ್ರಾಂಗಣಕ್ಕೆ ಏರಿಬರಲೆಂದು ಮಾಡಿರುವ ಮೆಟ್ಟಿಲುಗಳ ಮೋಡಿ ಚಿತ್ತಾಕರ್ಷಕ.

ಹೈದರ್ ಬುರುಜ್ (ಉಪಲಿ ಬುರುಜ್)

1584ರಲ್ಲಿ ಕಟ್ಟಲಾದ ಎತ್ತರವಾದ ಈ ಗೋಪುರ ವಿಜಯಪುರದ ರಕ್ಷಣೆಗಾಗಿ ಕಟ್ಟಿದ ಸೈನಿಕ ಕಟ್ಟಡಗಳಲ್ಲೊಂದು.

ತಾಜ್ ಬಾವಡಿ

ಇಬ್ರಾಹಿಂ ಆದಿಲ್ ಶಾ ತನ್ನ ಪ್ರಿಯ ಪತ್ನಿ ರಾಣಿ ತಾಜ್ ಸುಲ್ತಾನಳ ನೆನಪಿಗಾಗಿ ಕಟ್ಟಿಸಿದ ಈ ಬಾವಿ 223 ಅಡಿ ಚೌಕಾಕಾರದ 52 ಅಡಿ ಆಳವಿರುವ ಸುಂದರ ನಿರ್ಮಾಣ. ಕಮಾನಿನ ಒಳಭಾಗದಿಂದ ಮೆಟ್ಟಿಲ ಶ್ರೇಣಿಯೊಂದು ನೀರನ್ನು ತಲುಪಲು ಸಹಾಯ ಮಾಡುತ್ತದೆ.

ಎರಡನೇ ಅಲಿರೋಜಾ(ಬಾರಾಕಮಾನ್)

ವಿಜಯಪುರದಲ್ಲಿ ನೂರಾರು ಸಮಾಧಿ ಕಟ್ಟಡಗಳಿವೆ. ಬಾದಶಹರು, ಸರದಾರರು, ಸಾಧು ಸಂತರು ಇತ್ಯಾದಿಯಾಗಿ ಎಲ್ಲರೂ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಸಮಾಧಿ ಕಟ್ಟಡಗಳನ್ನು ಕಟ್ಟಿಸಿಕೊಂಡಿದ್ದಾರೆ. ಅವುಗಳಲ್ಲಿ ಗೋಳಗುಮ್ಮಟ, ಇಬ್ರಾಹಿಮ ರೋಜಾ ಹಾಗೂ ಅಲಿ ರೋಜಾ ಅಥವಾ ಬಾರಾ ಕಮಾನ್ ವಾಸ್ತು ಶಿಲ್ಪಗಳು ಪ್ರಪಂಚದಲ್ಲಿಯೇ ಖ್ಯಾತಿಯನ್ನು ಗಳಿಸಿವೆ.
ಒಂದು ದಂತ ಕಥೆಯ ಪಕ್ರಾರ ಎರಡನೆಯ ಇಬ್ರಾಹಿಮ ಆದಿಲ್ ಶಹನು ಸೂಕ್ಷ್ಮ ಕೆತ್ತನೆ ಕಲಾ ಕುಸುರಿಯ ಕಟ್ಟಡ ಇಬ್ರಾಹಿಂ ರೋಜಾವನ್ನು ಕಟ್ಟಿದನು ಆತನ ಮಗ ಮಹ್ಮದ್ ಆದಿಲ್ ಶಹನಿಗೆ ಸೂಕ್ಷ್ಮತೆಯ ಕುಸುರಿ ಕೆಲಸಕ್ಕೆ ಅವಕಾಶವೆ ಇರಲಿಲ್ಲ. ಆದ್ದರಿಂದ ಅಪ್ಪನನ್ನು ಮೀರಿಸಬೇಕಾದರೆ ಭವ್ಯವಾದ ಅಷ್ಟೆ ಸರಳ ಗಾಂಭೀರ್ಯದ ಕಟ್ಟಡ ಗೋಳ ಗುಮ್ಮಟವನ್ನು ಕಟ್ಟಬೇಕಾಯಿತು. ಆತನ ಮಗ ಎರಡನೇಯ ಅಲಿ ಆದಿಲ್ ಶಾಹನು ಇವರಿಬ್ಬರನ್ನು ಮೀರಿಸುವ ಕಟ್ಟಡದ ಯೋಜನೆಯನ್ನು ಹಾಕಿ “ಅಲಿರೋಜಾ” ಕಟ್ಟಲು ಪ್ರಾರಂಭಿಸಿದನಂತೆ, ದೌರ್ಬಾಗ್ಯದಿಂದ ಅದು ಪೂರ್ತಿಯಾಗಲಿಲ್ಲ. ಅರೆ ಕೆಲಸಕ್ಕೆ ಪರ್ಯಾಯ ಶಬ್ದವಾಗಿ “ಬಾರಾಕಮಾನ್” ಆಯಿತು. ಕಟ್ಟಡದ ತಳಪಾಯ ಹಾಗೂ ಕಟ್ಟೋಣದ ಕ್ಷೇತ್ರವು ಗೋಳಗುಮ್ಮಟ್ಟಕ್ಕಿಂತ ದೊಡ್ಡದಾಗಿದೆ ಎಂಬುದನ್ನು ಊಹಿಸಿಕೊಂಡಾಗ ಕಟ್ಟಡ ಪೂರ್ತಿಗೊಂಡಿದ್ದರೆ ಪ್ರಪಂಚದಲ್ಲಿಯೇ ಅದೊಂದು ಅದ್ಭುತ ಕಟ್ಟಡವಾಗುತ್ತಿತ್ತು!

ಸಹಸ್ರಫಣಿ ಪಾರ್ಶ್ವನಾಥ ಬಸದಿ

ವಿಜಯಪುರದ ಹೊರವಲಯದಲ್ಲಿ ಕಂಗೊಳಿಸುವ ಈ ಜೈನ ದೇಗುಲದ ಪಾರ್ಶ್ವನಾಥ ವಿಗ್ರಹ ನಭೋತೋನಭವಿಷ್ಯಯತಿ ಎನ್ನುವಂತಹದು. ಕಪ್ಪು ಶಿಲೆಯಲ್ಲಿ ಕಟ್ಟಿದ ಈ ವಿಗ್ರಹಕ್ಕೆ 1500 ವರ್ಷಗಳಿಗು ಮಿಕ್ಕಪ್ರಾಯ. 1008 ಹೆಡೆಗಳ ನಾಗರನ ಹೆಡೆಗಳಡಿಯಲ್ಲಿ ವಿರಾಜಮಾನವಾಗಿದ ಈ ವಿಗ್ರಹ. ಅದ್ಭುತ ಹೆಡೆಗಳ ಮೇಲೆ ಕ್ಷೀರಾಭಿಷೇಕ ಮಾಡಿದಾಗ, ಅಲ್ಲಿ ಅಡಗಿರುವ ಸಣ್ಣ ಕೊಳವೆಗಳ ದೊಡ್ಡ ಜಾಲದ ಮೂಲಕ ಹರಿದು ಬಂದ ಹಾಲು ಪಾರ್ಶ್ವನಾಥನ ವಿಗ್ರಹದ ಮೇಲೆ ಧಾರೆಯಾಗಿ ಸುರಿವ ದೃಶ್ಯ ನಯನ ಮನೋಹರ. ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಪಾರ್ಶ್ವನಾಥನಿಗೆ ಕ್ಷೀರಾಭಿಷೇಕ ಮಾಡಲಾಗುವುದು.

ಶಿವಗಿರಿ

ವಿಜಯಪುರ ನಗರದ ಉಕ್ಕಲಿ ರಸ್ತೆಯಲ್ಲಿರುವ 85 ಅಡಿ ಎತ್ತರದ ಶಿವನ ಮೂರ್ತಿ.

ಬಸವನ ಬಾಗೇವಾಡಿ

ವಿಜಯಪುರದಿಂದ ಪೂರ್ವಕ್ಕೆ 43 ಕಿ.ಮೀ. ದೂರದಲ್ಲಿರುವ ಬಾಗೆವಾಡಿ ಪ್ರಸಿದ್ಧ ಮಾನವತಾವಾದಿ, ಚಿಂತಕ ಬಸವೇಶ್ವರರ ಹುಟ್ಟಿದೂರು. 12ನೇ ಶತಮಾನದಲ್ಲಿ ಸಾಮಾಜಿಕ ಪರಿವರ್ತನೆಯ ಕ್ರಾಂತಿಗೆ ನಾಂದಿಹಾಕಿದ ಬಸವೇಶ್ವರ (ಬಸವಣ್ಣನವರು) ಕಲ್ಯಾಣದ ಚಾಲುಕ್ಯ ಸಾಮ್ರಾಟ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದವರು. ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ಬಸವ (ನಂದಿ) ಸಂಗಮೇಶ್ವರ, ಮಲ್ಲಿಕಾರ್ಜುನ ಮತ್ತು ಗಣಪತಿಯ ವಿಗ್ರಹಗಳಿವೆ. ಅಮೃತ ಶಿಲೆಯಲ್ಲಿ ಕಟ್ಟಿದ ಬಸವೆಶ್ವರ ಮತ್ತು ಅವರ ಶ್ರೀಮತಿಯ ವಿಗ್ರಹಗಳಿವೆ.

ಲಾಲಬಹಾದ್ದೂರ ಶಾಸ್ತ್ರೀ ಜಲಾಶಯ, ಆಲಮಟ್ಟಿ

ವಿಜಯಪುರ ದಿಂದ ಆಲಮಟ್ಟಿ ಪ್ರವಾಸಿ ತಾಣದ ದೂರ 60 ಕಿ. ಮೀ.

  1. ಜಲಾಶಯ
  2. ಮೊಗಲ್ ಗಾರ್ಡನ್
  3. ರಾಕ್ ಗಾರ್ಡನ್
  4. ಜಪನೀಸ್ ಗಾರ್ಡನ್(ಡೋಣಿ ಚಲನೆ)
  5. ಸಂಗೀತ ಕಾರಂಜಿ