ಮುಚ್ಚಿ

ಜಿಲ್ಲೆಯ ಬಗ್ಗೆ

ವಿಜಯಪುರವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಪ್ರಮುಖ ನಗರ ವಿಜಯಪುರ. ಬಿಜಾಪುರ ಜಿಲ್ಲೆಯ ಉತ್ತರದಲ್ಲಿ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಮತ್ತು ವಾಯುವ್ಯದಲ್ಲಿ ಸಾಂಗ್ಲಿ ಮಹಾರಾಷ್ಟ್ರ, ಪಶ್ಚಿಮದಲ್ಲಿ ಬೆಳಗಾವಿ ಜಿಲ್ಲೆ, ದಕ್ಷಿಣದಲ್ಲಿ ಬಾಗಲಕೋಟೆ, ಪೂರ್ವದಲ್ಲಿ ಗುಲ್ಬರ್ಗ ಮತ್ತು ಆಗ್ನೇಯದ ರಾಯಚೂರು ಜಿಲ್ಲೆಗಳಿಂದ ಆವರಿಸಿದೆ.

ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು ಆಗ ಇದು ವಿಜಯಪುರ (ವಿಜಯದ ನಗರ) ಎಂದು ಕರೆಯಲ್ಪಡುತ್ತಿತ್ತು. 13ನೇ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ ಬೀದರನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.

ಕ್ರಿ.ಶ. 1518 ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು.

ಕ್ರಿ.ಶ. 1724ರಲ್ಲಿ ವಿಜಯಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. 1760 ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. 1818 ರ 3 ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು.

ಕ್ರಿ.ಶ. 1848 ರಲ್ಲಿ ಸಾತಾರಾ ಮತ್ತು ವಿಜಯಪುರನ್ನು ಮುಂಬಯಿ ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ ಕಲಾದಗಿ ಜಿಲ್ಲೆಗೆ ಈಗಿನ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿಸಲ್ಪಟ್ಟವು. ಕಲಾದಗಿ ಜಿಲ್ಲಾ ಕೇಂದ್ರವನ್ನು ಕ್ರಿ.ಶ. 1885 ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು.

ತದನಂತರ ಕ್ರಿ.ಶ. 1956 ರಲ್ಲಿ ಆಗಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ ರಾಜ್ಯಕ್ಕೆ) ಸೇರಿಸಲಾಯಿತು.

2014 ರ ನವೆಂಬರ್ 1 ರಂದು ಈ ನಗರವನ್ನು ಬಿಜಾಪುರದಿಂದ “ವಿಜಯಪುರ” ಎಂದು ಮರುನಾಮಕರಣ ಮಾಡುವ ಕೋರಿಕೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ.

ವಿಜಯಪುರ ಜಿಲ್ಲೆಯು ಕರ್ನಾಟಕದ ಬೆಳಗಾವಿ ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ವಿಜಯಪುರ ಉಪವಿಭಾಗವು ವಿಜಯಪುರ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಬಬಲೇಶ್ವರ, ತಿಕೋಟ, ತಾಳಿಕೋಟಿ, ಕೊಲ್ಹಾರ ಮತ್ತು ನಿಡಗುಂದಿ ತಾಲ್ಲೂಕುಗಳನ್ನು ಒಳಗೊಂಡಿದೆ. ಇಂಡಿ ಉಪವಿಭಾಗವು ಇಂಡಿ, ಸಿಂದಗಿ, ದೇವರ ಹಿಪ್ಪರಗಿ, ಚಡಚಣ ಮತ್ತು ಆಲಮೇಲ ತಾಲ್ಲೂಕುಗಳನ್ನು ಒಳಗೊಂಡಿದೆ.